Thursday, July 02, 2015


ರಕ್ತ ಜೇನು 
====== 
ಇದೋ ನನ್ನ ಹೃದಯದಲಿ 
ಹೆಜ್ಜೇನ ಗೂಡು. 
ಅಲ್ಲಿರುವ ಆಸೆಗಳ ಬದಿಗಿರಿಸಿ.. 
ಒತ್ತರಿಸುವ ದುಃಖವ 
ಹೆಪ್ಪು ಗಟ್ಟಿಸಿ... 
ಕೋಟಿ ಕಲ್ಪನೆಗಳ ಕರೆದು 
ಝಾಡಿಸಿ... 
ಜೇನು ಹುಳುವಾಗಿ 
ಪರಿವರ್ತಿಸಿರುವೆ.
ಮಾನಸ ಸರೋವರದ 
ತಟದಲ್ಲೇ ನನ್ನ ಕನಸುಗಳ 
ಪುಷ್ಪಲೋಕ ಬೆಳೆಸಿದ್ದೆ.. ಗೊತ್ತಲ್ಲ? 
ಅಲ್ಲಿಗೆ ಜೇನು ಹುಳುಗಳ ಅಟ್ಟಿದ್ದೆ 
ಅಲ್ಲಿನಷ್ಟೂ ಪುಷ್ಪಗಳ ಮಧುವನ್ನು ಹೀರಿ 
ಹಾರಿ ಬಂದಿವೆ ... ನನ್ನ ಮಾತು ಚಾಚೂ ತಪ್ಪದೆ...
ಪೋಣಿಸಿಯೇ ಬಿಟ್ಟಿವೆ ನೋಡು ಅದೆಂಥ 
ಅದ್ಭುತ ಜೇನ್ಗೂಡನ್ನು ನನ್ನೀ ಕಲ್ಪನೆಗಳು 
ಅರ್ಥಾತ್ ಜೇನು ಹುಳುಗಳು! 
ಕೋಟಿ ಹುಳುಗಳು ಒಮ್ಮೆಲೇ ದಾಳಿ ಮಾಡಿವೆ 
ಕೋಟಿ ಮುಳ್ಳುಗಳ ಹೃದಯಕ್ಕೆ ಒಮ್ಮೆಲೇ ಚುಚ್ಚಿವೆ
ಫಲಿತಾಂಶ: 
ನಿನಗಾಗಿಯೆ ಮೊಗೆ ಮೊಗೆದು ಕೊಡಲು 
ಬತ್ತಲಾರದಷ್ಟು ಪ್ರೀತಿ ಜೇನು 
ಜೊತೆಗೇ.. 
ವಿಹ್ವಲಗೊಂಡ ಹೃದಯದ ರಕ್ತಸ್ರಾವ 
ಪರಿಣಾಮದ ಪರಿಮಾಣ ಅರಿಯೆ
ಪ್ರೀತಿ ಜೇನನ್ನು ರಕ್ತಸ್ರಾವದ ನೋವನ್ನು
ಬಸಿದು ಸೋತಿರುವೆ.
ಬದುಕುಳಿವ ಮಾತು ಕನಸಷ್ಟೆ
ಇನ್ನುಳಿದಿರುವುದು ನಿನ್ನ ಕೆಲಸ.
ಬಾ... ನಡೆದು ಹೋಗಲಿ ಈಗಲೇ 
ನಿನ್ನ ಹೆಜ್ಜೇನ ಬೇಟೆ 
ನನ್ನೀ ಹೃದಯದ ಮೇಲೆ 
ಇರಿಯ ಬೇಕಿಲ್ಲ ಹೃದಯವನ್ನು 
ತರಬೇಕಿಲ್ಲ ಬೆಂಕಿ ಪಂಜನ್ನು 
ಸುಮ್ಮನೆ ಕೈ ಹಾಕು 
ಜಿನುಗಬಹುದು ರಕ್ತ ಜೇನು.
 ವೃತ್ತ:
 ======
ತನ್ನ ವೃತ್ತಾಂತದ ಅರ್ಥವೇ ತಿಳಿಯದೆ 
ಗುಂಡಾಗಿದೆ ಇದು. 
ತಾನಾಗೆ ಮೂಡಿದ್ದೋ ?
ಯಾರೋ ಸುತ್ತಿದ್ದೋ ?
ಎಂಬ ಉತ್ತರದ 
ಜ್ಞಾನೋದಯವಾದ ನೆನಪೇ ಅದಕಿಲ್ಲ 
ಹುಡುಕಾಟ ಹೀಗೆ ಸಾಗಿದೆ...
ತಾನು ಸಂಪೂರ್ಣನೋ ... 
ಪರಿಪುರ್ಣನೋ .... 
ಅರ್ಥಪೂರ್ಣನೋ .... 
ಯಾರೂ ತಿಳಿ ಹೇಳುವರಿಲ್ಲ.
ದುಂಡಾಗಿರುವ ಕಾರಣ ಕುರೂಪಿಯಂತೂ ಅಲ್ಲ 
ಅದಷ್ಟೇ ಕಾರಣಕ್ಕೆ ಸುಂದರನೂ ಅಲ್ಲ!
ಎರಡೂ ಬಿಂದು ಪರಸ್ಪರ ಸ್ಪರ್ಶಿಸಿರುವ ಕಾರಣ 
ಪರಿಪೂರ್ಣ ಎಂದುಕೊಂಡರೂ 
ಪರಿಧಿಯೊಳಗಿನ ಜಾಗ ಶಾಶ್ವತವಾಗಿ ಖಾಲಿಯಾಗಿದೆ 
ತುಂಬಲಾರದ ಶೂನ್ಯದಂತೆ... 
ತಾನು ಸುತ್ತುತ್ತಲೂ ಇಲ್ಲ 
ಚಲಿಸುತ್ತಲೂ ಇಲ್ಲ 
ಆ ಕಾರಣ.. 
ಅರ್ಥಪೂರ್ಣನೂ ಅಲ್ಲ.
ಸದ್ಯಕ್ಕೆ ತಾನೊಂದು ವಿಕಾರವಾಗಿರದ 
ಆಕಾರವೆಂದಷ್ಟೇ ಗೊತ್ತು 
ಅದರ ವ್ಯಾಸ ಅಳತೆಗೋಲಿಗೆ ಸಿಗದಷ್ಟಿದೆ 
ತನ್ನ ಪರಿಧಿಯು ಸುತ್ತಲೂ ಒಂದೇ ರೀತಿ 
ಕಾಣುವುದರಿಂದ 
ತಾನಾವ ದಿಕ್ಕಿನತ್ತ ದಿಟ್ಟಿಸುತ್ತಿದ್ದೇನೆ 
ಎಂಬುದೂ ತಿಳಿದಿಲ್ಲ.
ತನ್ನ ವ್ಯಾಸದಷ್ಟೇ ಅದರ ಲೋಕ 
ತನ್ನ ಪರಿಧಿಯಲ್ಲೇ ಅದು ಮೂಕ.

Sunday, September 30, 2012

ದೃಷ್ಟಿಕೋನ

ತಕರಾರಿರುವುದು ಪುಣ್ಯಕೋಟಿಯ


ಸತ್ಯ ಸಂಧತೆಯಲ್ಲ

ಪುಣ್ಯವಂತೆ ಆ ಆಕಳು....

ಮನಸನ್ನು ಘಾಸಿ ಗೊಳಿಸಿದ್ದು

ಹುಲಿರಾಯನ ದಾರುಣ ಸಾವು...

ಎಂಥ ಪಾಪದ ಹುಲಿಯು ಇದು

ಹುಲಿ ಹುಲ್ಲನ್ನು ಮೇದೀತೆ?

ಪುಣ್ಯಕೋಟಿಯ ಬೇಟೆಯಾಡಲು

ಹುಲಿಗೆ ಪ್ರಾಕೃತಿಕ ಹಕ್ಕಿತ್ತು...



ಪುಣ್ಯಕೋಟಿಯೇನೋ ತನ್ನ ಮಾತು ಉಳಿಸಿಕೊಂತು

ಹುಲಿ ಕರುಣೆಗೆ ಕಟ್ಟುಬಿದ್ದು ತನ್ನ ತಾನೇ ಕೊಂದುಕೊಂತು

ಸರಿ-ತಪ್ಪು ಯಾರದೂ ಅಲ್ಲ..

ಹಸುವಿಗೆ ಹುಲ್ಲು

ಹುಲಿಗೆ ಹಸುವು

ಎಲ್ಲವೂ ಹಸಿವೆಗೆ ....



ಕಥೆ ಕೇಳುವ ನಮಗೆ

ಆಕಳು ಮತ್ತು ಕರುವಿನ ಬಗ್ಗೆ ಅನುಕಂಪ...

ಹುಲಿಯ ವರ್ತನೆ ಭೀಬತ್ಸ!

ಕೊನೆಗೆ...

ಪುಣ್ಯಕೋಟಿಯ ಸತ್ಯಮೇವ ಜಯತೆ ಸಂದೇಶ...

ಕಣ್ಮರೆ ಯಾಗುವ ಹುಲಿಯ ತ್ಯಾಗ,

ಹಾಗು ಪುಣ್ಯಕೋಟಿ ಬಗ್ಗೆ

ನೆಮ್ಮದಿಯ ನಿಟ್ಟುಸಿರು...





"ಎನ್ನ ಒಡಹುಟ್ಟಕ್ಕ ನೀನು"

ಎಂದ ವ್ಯಾಘ್ರ ನ ಸಾವು ನ್ಯಾಯವೇ..?

ಆರು ನಮಗೆ ಹಿತವರು...?



ಜೀವ ಎಲ್ಲರಿಗೂ ಒಂದೇ....

ತದ್ವಿರುದ್ಧ - ಹನಿಗವನಗಳು

ತದ್ವಿರುದ್ಧ - ಹನಿಗವನಗಳು




******



ವರ್ಷಧಾರೆ ಸುರಿದರೂ

ಹಣೆಯ ಬೆವರು ಬಿದ್ದರೂ

ಉತ್ತಿ - ಬಿತ್ತಿದ ಕಾಯಕ ಕಡೆಗಣಿಸಿ..

ಫಲ ನೀಡದೆ ನಿರುತ್ತರಳಾದಳು ಭೂಮಿ..





******



ಯಾರೂ ತಿಳಿಯದ..

ಯಾರೂ ತುಳಿಯದ

ಹಾದಿಯು ತಂತಾನೇ ಮುಂದೆ ಸಾಗುತಿದೆ

ಯಾರಿಗೂ ಸಿಗದೇ...



******



ಜಾಲಿ ಗಿಡದ ಸುಂದರ ಮುಳ್ಳು

ಬಿಸಿಲ ಹಬೆ ತಾಳದೆ ಅಳುತಿರಲು

ಪ್ರೀತಿ ಹೃದಯವು ಮುಳ್ಳಿನ ಮೇಲೆ ಬಿತ್ತು..

ಮುಳ್ಳು ತಂಪಾಯ್ತು ..

ಹೃದಯ ಸತ್ತು ಹೋಯ್ತು...



******



ಹೆಣ್ಣೊಬ್ಬಳ

ಕಣ್ಣೀರು ನಗುತ್ತಿತ್ತು !

ಕಣ್ಣ ಬಂಧನ ಬಿಡಿಸಿಕೊಂಡಾಗ

ಅವಳ ನಗುವು ಅಳುತ್ತಿತ್ತು!

ತುಟಿಯಂಚಿನಿಂದ ಹೊರ ಹಾಕಿದಾಗ



******



ಪ್ರಶ್ನೆಯೊಂದು ಪ್ರಶ್ನೆಯಾಗಿಯೇ ಇದೆ

ಉತ್ತರ ಸಿಗದೇ

ಉತ್ತರವೊಂದು ಮತ್ತೆ ಪ್ರಶ್ನೆಯಾಗಿದೆ

ಅರ್ಥವೇ ಆಗದೆ... !





******



ಮನಸು ಕಿವುಡು... ಹೃದಯದ ಮಿಡಿತಕೆ

ಭಾವ ಕುರುಡು... ಮನಸಿನ ಕುಣಿತಕೆ

ಹೃದಯ ಮೂಕ.... ಭಾವದ ನೋವಿಗೆ..

Thursday, April 01, 2010

ಕವನದ ಆಕ್ರಂದನ


ಇದು ಪುಟ್ಟ ಕವನ...
ಅದರೊಳಗೇ
ಬಚ್ಚಿಟ್ಟುಕೊಂಡಿದೆ..
ತನ್ನ ಮೌನ ಆಕ್ರಂದನ...
ನಾಲ್ಕೇ ಸಾಲುಗಳ
ಅಪಕ್ವ ವೆನಿಸುವ ನುಡಿಗಳು..
ಆದರೂ.. ತನ್ನೊಳಗೆ..
ಅಡಗಿಸಿದ
ಯಾರೂ ಅರ್ಥೈಸದ ...
ಯಾರಿಗೂ ಬೇಡದ
ಸಾವಿರಾರು..
ಪರಿಪಕ್ವ ವಿಚಾರಗಳ..
ಕೋಟ್ಯಾಂತರ ನಿಟ್ಟುಸಿರುಗಳ
ಒಳಗೊಂಡ ಪುಟ್ಟ ಕವನ..
ಜೊತೆಗೆ ತನ್ನ ಮೌನ ಆಕ್ರಂದನ..
ತುಟಿಯಾಚೆ ಬಾರದೆ...
ಮನದೊಳಗೆ ಕೂರದೆ...
ಸದ್ದೇ ಮಾಡದಂತೆ
ಇದ್ದೂ ಇಲ್ಲದಂತೆ...
ಇಲ್ಲದೆಯೂ ಇರುವಂತೆ...
ತನ್ನ ಅಸ್ತಿತ್ವವನ್ನೇ..
ಪ್ರಶ್ನಿಸಿಕೊಳ್ಳುವ ಕವನ..!
ಅಗೋಚರ ಪದಗಳ..
ಅಚ್ಚರಿಯ ಅರ್ಥಗಳ..
ಒಮ್ಮೆಲೇ.. ಒಳಗೊಂಡ ಪುಟ್ಟ ಕವನ..
ಜೊತೆಗೆ ತನ್ನ ಮೌನ ಆಕ್ರಂದನ....

Tuesday, February 09, 2010

ಕೇವಲ ನೆನಪಿಗಾಗಿ..

ಮನವೇ ಪ್ರಕೃತಿ..
ಆಗಸವೇ ನಿರೀಕ್ಷೆ...
ಭಾವವೇ ಸಾಗರ
ಕನಸಿನ ತೀರದಲ್ಲೇ
ಆಸೆಗಳ
ಮರಳ ಗೂಡು...
ಕಲ್ಪನೆಗಳೇ
ಆಗಾಗ ಮೂಡುವ
ಅಲೆಗಳಂತೆ....


ಎಲ್ಲವೂ ಸರಿ ಇದ್ದರೆ...
ಮನದ ಪ್ರಕೃತಿ
ನಗುತಲೇ ಇದ್ದರೆ...
ಆಸೆಗಳ ಮರಳ ಗೂಡು
ಹಾಗೇ ಉಳಿಯಬಹುದು
ಎಂದಿಗೂ ಅಳಿಯದ
ನೆನಪಿನ ಕೃತಿಯಾಗಿ...


ಅಕಸ್ಮಾತ್...
ಮನದ ಪ್ರಕೃತಿ ಮುನಿದು....
ಭಾವಗಳ ಸಾಗರ
ಹುಚ್ಚಾಗಿ ಕುಣಿದು...
ಕಲ್ಪನೆಗಳ ಸುನಾಮಿ ಅಲೆಗಳು..
ಭೋರ್ಗರೆದು ಅಪ್ಪಳಿಸಿದರೆ...
ಆಸೆಗಳ ಮರಳ ಗೂಡು
ಕೊಚ್ಚಿ ಹೋಗಬಹುದು...
ಅಳಿದು ಹೋಗಿ
ಕಾಡಬಹುದು..
ಕೇವಲ ನೆನಪಾಗಿ... !


ಕೊನೆಗೆ ....
ಉಳಿಯುವುದು...
ಆಗಸವೆಂಬ ನಿರೀಕ್ಷೆ ಮಾತ್ರ...
ಆಗಸ ಎಂದಿಗೂ ಅಳಿಯದ ಅಚ್ಚರಿ...
ಮತ್ತೆ ಮರಳ ಗೂಡು ಕಟ್ಟಬೇಕೆ... ?
ಪ್ರಕೃತಿ ಸಿದ್ಧಳಾಗುವ ವರೆಗೂ ಕಾಯಬೇಕು ...
ಅಲ್ಲಿಯವರೆಗೂ...
ನಿರೀಕ್ಷೆಯ ಆಗಸವನ್ನೇ ನೋಡಬೇಕು..
ಕೇವಲ ನೆನಪಿಗಾಗಿ..

Tuesday, December 15, 2009

ಹಾಡು ನನ್ನ ಚರಮ ಗೀತೆ..

ಈ ಜೀವ ದೇಹದಿಂದ ಹಾರಲು
ಆತ್ಮ ಚಿತೆಯಿಂದ ಹೊರಡಲು
ನಾಚುವಂತೆ..
ನನ್ನದೇ ಕವಿತೆ..
ಹಾಡು ನನ್ನ ಚರಮ ಗೀತೆ..

ತಣಿಯಲಿ ಈ ಆತ್ಮ
ಕುಣಿಯಲಿ ಎನ್ನ ಚೇತನ..
ಹರಿಯುವಂತೆ...
ಸುಪ್ತ ಸರಿತೆ..
ಹಾಡು ನನ್ನ ಚರಮ ಗೀತೆ...

ಬದುಕಿಗೆ ಅರ್ಥ ಬರುವಂತೆ ...
ಕೆದಕಿದ ನೋವು ಸುಡುವಂತೆ..
ಮೂಡುವಂತೆ..
ಹೊಸ ಚರಿತೆ...
ಹಾಡು ನನ್ನ ಚರಮ ಗೀತೆ..

ಅಂತರಾತ್ಮ ಅರಿವಂತೆ..
ತಪ್ತ ಭಾವದ ಕುರಿತಂತೆ..
ಈ ಬಾಳ ಜಂಜಾಟದ...
ಒಗಟು ಬಿಡಿಸುವಂತೆ..
ಹಾಡು ನನ್ನ ಚರಮ ಗೀತೆ....

ಈ ಆತ್ಮ ಜನ್ಮ ತಳೆವಂತೆ...
ಮತ್ತೆ ಎಲ್ಲೋ ಹುಟ್ಟಿ ಬೆಳೆವಂತೆ..
ಹರಸಿ ಕೂಗು ....
ಮತ್ತೆ ಮತ್ತೆ....
ಹಾಡು ನನ್ನ ಚರಮ ಗೀತೆ..!

Tuesday, November 03, 2009

ನೀ ನನಗೆ ... ನಾ ನಿನಗೆ...

ನಿನ್ನೊಳಗೆ ನಾನಾಗಿ
ನನ್ನ ನಾ ನಿನಗಾಗಿ
ನೀಡಿ
ನಿನ್ನಲ್ಲೇ ನರ್ತಿಸುವೆ
ನಿನ್ನೋಲವೇ ನಾನಾಗುವೆ
ನನದೇನು..?
ನನಗಿರುವುದೇನು...?
ನೀನೆ ನನ್ನ ನಲಿವು ...
ನೀನೆ ನನ್ನ ನಗುವು...
ನಿನಗಾಗಿ ನಾನು
ನನಗಾಗಿ ನೀನು
ನನ್ನೆದೆಯಲ್ಲಿ ನೀ ನೇಗಿಲು
ನಿನ್ನೆದೆಯಲ್ಲಿ ನಾ ನೆರಳು
ನಾನು ನೀಲಾಕಾಶ
ನೀನಲ್ಲಿರೋ ನಕ್ಷತ್ರ
ನಾ ನಿನಗೆ ನಕ್ಷೆ..
ನೀ ನನಗೆ ನಿರೀಕ್ಷೆ ...

Thursday, October 29, 2009

ಅವಳ ಹೆಸರು

ಅಗ್ನಿಯೂ ಸುಟ್ಟುಹೋಗುವ ಕೋಪ
ಧರಿತ್ರಿಗೂ ಮೀರಿದ ಮೌನ
ಕೊಂಡು ತಂದವಳು
ನನ್ನ ಉಸಿರು
ಗೆಳತಿ ಅವಳ ಹೆಸರು

ಹೂವನು ಮೀರಿದ ಕಂಪು
ಇವಳು ಮಂಜಿಗಿಂತ ತಂಪು
ನನ್ನೆದೆಯ ಮಡುವಿನ ಕಮಲ
ಅರಳಿದಳು ಸೋಕಿಸದೆ ಕೆಸರು
ಮಡದಿ ಅವಳ ಹೆಸರು

ದೀಪದಾರತಿಯ ಬೆಳಕು
ಕಾರಿರುಳ ಕಳೆವ ಹೊಳಪು
ಹೊತ್ತು ಬರುವವಳ
ಮನ ಹಸಿರು
ಹೆಣ್ಣು ಅವಳ ಹೆಸರು

ತೊಡೆದು ಪುರುಷನ ವಿಕೃತಿ
ಕಲಿಸಿ ಬಾಳಿಗೆ ಸಂಸ್ಕೃತಿ
ಸಲಹುವವಳ
ಬದುಕು ಕೆನೆ ಮೊಸರು
ಪ್ರಕೃತಿ ಅವಳ ಹೆಸರು...